ಅಸಲಿಯತ್ತಿನಲ್ಲಿ ಹೊರಗಿನ ಸ್ವಚ್ಛಂದತೆಯಲ್ಲಿ ಜೀವಂತವೇ ಇಲ್ಲದ ವೈರಾಣುಗಳು ತನಗೆ ಬೇಕಾದ ಜೀವಂತ ಕೋಶ ಸಿಗುತ್ತಿದ್ದಂತೆಯೇ ಒಮ್ಮಿಂದೊಮ್ಮೆಲೆ ಅವತಾರವನ್ನೇತ್ತಿ ಜೀವಿಗಳಲ್ಲಿ ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ. ಅತಿ ಕಡಿಮೆ ವಂಶವಾಹಿಯನ್ನು ಹೊಂದಿದ ಸಣ್ಣ ಪ್ರೋಟೀನ್ ಕಣವೊಂದು ಇಷ್ಟೊಂದು ಹಾನಿ ಮಾಡಬಹುದಾದರೆ ? ಆದನ್ನು ಒಳ್ಳೆಯದಾಗಿಯೂ ಬಳಸಿಕೊಳ್ಳಬಹುದು ಎಂಬುದು ವಿಜ್ಞಾನಿಗಳ ಆಶಾವಾದ. ಕಾಡುಮೇಡುಗಳನ್ನು ದಹಿಸುವ ಬೆಂಕಿ ಹಣತೆಯೊಳಗಿದ್ದರೆ ಹೇಗೆ ದೀಪವೋ? ಅಂತೆಯೇ ರಕ್ಕಸರೂಪಿ ವೈರಾಣು ವೈರಿಯಷ್ಟೇ ಅಲ್ಲ ,ನಮಗೆ ಉಪಕಾರಿಯೂ ಆಗಬಹುದು!!. ಈ ಮಾನವಸ್ನೇಹಿ ವೈರಾಣುವಿನ ಹುಡುಕಾಟದಲ್ಲಿ ವಿಜ್ಞಾನಿಗಳು ಶತಮಾನವನ್ನೇ ಕಳೆದಿದ್ದಾರೆ ಎಂದರೆ ತಪ್ಪಾಗಲಾರದು. ಸಿಂಹವೊಂದು ಜಿಂಕೆಯನ್ನು ಬೇಟೆಯಾಡುವಂತಹ ನಿಸರ್ಗ ಸೂತ್ರವೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್ಗಳಿಗೂ ಸಲ್ಲುತ್ತದೆ.ಇಂತಹ ವೈರಸ್ ಗಳಿಗೆ ಬ್ಯಾಕ್ಟೀರಿಯಾಫೇಜ್(Bacteriophage) ಎಂಬುದೇ ನಾಮಧೇಯ .
ಇಂತಹ ವಿಶೇಷ ಸಾಧ್ಯತೆಯ ಹುಡುಕಾಟದ ಇತಿಹಾಸದಲ್ಲಿ ಮೊಟ್ಟಮೊದಲು ಕಂಡುಬರುವ ಕೆಲಸ ಪ್ಯಾರಿಸ್ನ ಜೀವ ವಿಜ್ಞಾನಿಯಾದ ಫೆಲಿಕ್ಸ್ ಎಂಬುವನದ್ದು.೧೯೧೭ ರಲ್ಲಿ ಸೈನಿಕರಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಅತಿಸಾರದ ಮೂಲವನ್ನು ಹುಡುಕುತ್ತಿದ್ದ ಫೆಲಿಕ್ಸ್ , ರೋಗಕ್ಕೆ ಶೈಗೆಲ್ಲಾ ಎಂಬ ಬ್ಯಾಕ್ಟೀರಿಯ ಕಾರಣವೆಂದು ತಿಳಿದು ಬಂತು. ಹೆಚ್ಚಿನ ಅಧ್ಯಯನಕ್ಕಾಗಿ ಸೂಕ್ಷ್ಮದರ್ಶಕದಲ್ಲಿ ಇವುಗಳನ್ನು ಪರಿಶೀಲಿಸಿದಾಗ ಇವುಗಳನ್ನು ಕೊಲ್ಲುತ್ತಿರುವ ವೈರಾಣುಗಳೂ ಜೊತೆಗೆ ಕಂಡುಬಂದವು .ಫೆಲಿಕ್ಸ್ ಈ ವೈರಸ್ ಗಳನ್ನು ಕೃತಕವಾಗಿ ಬೆಳೆಸಿ ಒಂದು ಔಷಧವಾಗಿ ಬಳಸುವ ತಂತ್ರ ಹೆಣೆದರು. ಅದರೆ ವೈರಾಣು ಮಾನವನ ಕೋಶಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಭಯವಿದ್ದೇ ಇತ್ತು. ಕೊನೆಗೂ ಗಟ್ಟಿ ಮನಸ್ಸು ಮಾಡಿ ಆ ವೈರಾಣುವಿನ ಪ್ರಯೋಗವನ್ನು ಸ್ವಯಂ ತಮ್ಮ ಮೇಲೆಯೆ ಮಾಡಿಕೊಂಡರು . ವಿಜ್ಞಾನಿಯೊಬ್ಬ ತನ್ನ ಸಂಶೋಧನೆಗೆ ಎಂತಹ ಸಾಹಸವನ್ನು ಮಾಡಬಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾದರೆ , ಅದೃಷ್ಟವಶಾತ್ ಅವರಿಗೆ ಈ ಪ್ರಯೋಗ ಯಾವ ತೊಂದರೆಯನ್ನು ಮಾಡಲಿಲ್ಲ ಎಂಬುದು ಔಷಧ ವಿಜ್ಞಾನಕ್ಕೊಂದು ಹೊಂಬೆಳಕನ್ನು ಹರಿಸಿತ್ತು. ತದನಂತರ ಆ ವೈರಾಣುಗಳನ್ನು ಔಷಧ ರೂಪದಲ್ಲಿ ಉಪಯೋಗಿಸಲಾಯಿತು.
ವಿಜ್ಞಾನ ತಂತ್ರಜ್ಞಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಪ್ರಗತಿ ಕಂಡಿದ್ದರಿಂದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಈ ವೈರಸ್ ಗಳನ್ನು ಪ್ರಯೋಗಾಲಯದಲ್ಲಿ ಜೈವಿಕ ತಂತ್ರಜ್ಞಾನದ ಮೂಲಕ ಸೂಚಿತ ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವಂತೆ ಮಾರ್ಪಾಡು ಮಾಡಲಾಗುತ್ತದೆ . ನಿರ್ಧರಿತ ಬ್ಯಾಕ್ಟೀರಿಯಾಗಳ ವಂಶವಾಹಿಯನ್ನು ತುಂಡು ಮಾಡುವಂತಹ CRISPR ( ಒಂದೇ ರೀತಿಯ ಡಿಎನ್ಎ ಉಳ್ಳ ಅನುರಣಿತ ಸಂಯೋಜನೆ ) ಕಣಗಳನ್ನು ವೈರಸ್ಗಳ ಸಹಾಯದ ಮೂಲಕ ಕಳುಹಿಸುತ್ತಾರೆ . ಈ ವೈರಾಣುಗಳಿಗೆ ರೋಗಕಾರಕ ಬ್ಯಾಕ್ಟೀರಿಯಗಳಲ್ಲಷ್ಟೇ ಇರುವಂತಹ ರಾಸಾಯನಿಕ ಕಿಣ್ವಗಳು , ಬಾಹ್ಯ ಬದಲಾವಣೆಗಳು , ಔಷಧನಿರೋಧಕ ವಂಶವಾಹಿ ಸರಣಿ ಎಂತಹ ವಿಶೇಷತೆಗಳೇ 'ಬಕಕ್ಷೀರ ನ್ಯಾಯ'ವಾಗಿ ಪರಿಣಮಿಸುತ್ತದೆ. ಇದರಿಂದ ರೋಗಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ ಮತ್ತು ಇತರ ಸಾಮಾನ್ಯ ಕೋಶಗಳಿಗೂ, ನಮ್ಮ ದೇಹಕ್ಕೆ ಉಪಯುಕ್ತವಾದ ಇತರ ಸೂಕ್ಷ್ಮಜೀವಿಗಳಿಗೂ ತೊಂದರೆಯಾಗದಂತೆ ಕೆಲಸ ಮಾಡುತ್ತವೆ.
ಈ ರೀತಿಯ ಆರೋಗ್ಯಕರ ವೈರಾಣುಗಳು ಸಣ್ಣಪುಟ್ಟ ಮೊಡವೆ ಉಂಟುಮಾಡುವಂತಹ ಬ್ಯಾಕ್ಟೀರಿಯಾ ಗಳಿಂದ ಹಿಡಿದು ನ್ಯುಮೋನಿಯಾ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಕಾರಕ ಸೂಕ್ಷ್ಮಜೀವಿಗಳನ್ನು ತಡೆಗಟ್ಟುತ್ತದೆ ಎಂಬುದು ಸಾಲು ಸಾಲು ಅಧ್ಯಯನಗಳ ನಂತರ ತಿಳಿದುಬಂದ ವಿಷಯ . ವೈರಸ್ ಎಂಬ ನಾಮ ಮಾತ್ರದಿಂದಲೇ ಭಯವನ್ನುಂಟು ಮಾಡುವ ಈ ಸೂಕ್ಷ್ಮಜೀವಿ ಹತ್ತಿನ ಮಧ್ಯೆ ಹನ್ನೊಂದಾಗದೆ ನಮ್ಮ ಜೀವನದ ಇನ್ನೊಂದು ಭಾಗವಾಗುವುದರಲ್ಲಿ ಸಂಶಯವಿಲ್ಲ .
ಹೇಮಂತ ಲೋಂಢೆ
References
Write a comment ...