ಕರ್ಚೀಪು

ಅವನೊಬ್ಬ ವೃದ್ಧ. ತನ್ನ ಸ್ವಂತ ಮಗನಿಂದಲೇ ಮನೆಯಿಂದ ಹೊರಹಾಕಲ್ಪಟ್ಟ ಒಬ್ಬಂಟಿ ಮುದುಕ. ಬದುಕಲೇನಾದರೂ ಮಾಡಬೇಕು. ಕರ್ಚೀಪು ಮಾರುತ್ತಿದ್ದ, ನೊಂದವರ ಕಣ್ಣೀರು ಒರೆಸುವ ದಣಿದವರ ಬೆವರು ಅಳಿಸುವ ಬಣ್ಣದ ಕರ್ಚೀಪು ಮಾರುತ್ತಿದ್ದ. ಎಲ್ಲರಂತಲ್ಲ ಅವನ ಕರ್ಚೀಪುಗಳು, ಅವನು ಮಾರುವ ಕರಾವಸ್ತ್ರಗಳ ಮೇಲೆ "ನಗುತಿರು, ಬದುಕು ಕೂಡ ಈ ಕರ್ಚೀಪಿನಂತೆ ಮಡಚಿದ್ದಾಗ ಕಣ್ಣೇರು ಒರೆಸುತ್ತದೆ ಹತ್ತಿದ ಹನಿಗಳ ಒಗೆಯಲು ಬಿಡಿಸಿದಾಗ ನೀವಿದನ್ನು ಓದಿ ನಕ್ಕ ಹಾಗೆ ನಗಿಸುತ್ತದೆ" ಎಂಬಂತಹ ಸಾಂತ್ವನದ ಸಾಲುಗಳು. Let the smile spread ಎಂಬುದನ್ನು ಬರೆದ ಕಸೂತಿ ಮಾಡಿದ ಕರವಸ್ತ್ರಗಳು.

ಬದುಕೊಂದು ಸುಂದರ ಕ್ರೌರ್ಯ ಅಲ್ವಾ?!  ದುಃಖ ತುಂಬಿಕೊಂದಾವಣ ಎದೆಗೆ ಖುಷಿ ಹಂಚುವ ಕೆಲಸ ಕೊಡುತ್ತದೆ.

ಈ ರೀತಿಯ ಸಾಲುಗಳನ್ನು ನೋಡಿ ಹಲವರು ಕೊಂಡುಕೊಂಡು ಹೋಗುತ್ತಿದ್ದರು. ಇವನನ್ನು ನಗುತ್ತಾ ಮಾತನಾಡಿಸುತ್ತಿದ್ದರು.


"ಏನಜ್ಜ, ಇದನ್ನೆಲ್ಲಾ ನೀನೇ ಬರೆದಿದ್ದಾ?" ಅಂತ ಕೇಳಿದವರಿಗೆ


"ಹೌದು, ನೀವು ಖುಷಿಯಿಂದ ಇರೋದಾದ್ರೆ, ನೀವೂ ಒಂದು ಸಾಲು ಹೇಳಿ ಅದನ್ನೂ ಬರೆದು ಕುಸುರಿ ಮಾಡ್ತೀನಿ "ಅಂತ ಹೇಳ್ತಿದ್ದ


ಮನೆಯಲ್ಲಿ ಜಗಳವಾಗಿ ಮಗನು "ಅಪ್ಪ, ನಿನ್ನನ್ನು ಒಳ್ಳೆ ವೃದ್ಧಾಶ್ರಮಕ್ಕೆ ಸೇರಿಸ್ತೀನಿ, ನಿನಗೂ ಒಳ್ಳೆ ಕಂಪೆನಿ ಸಿಗುತ್ತೆ " ಎಂದಾಗ  ಅದನ್ನೂ ಮುಂಚೆಯೇ ಯೋಚಿಸಿದ್ದ ಇವನು ತನ್ನ ಜೀವನದ ಸಂಜೆಯಲ್ಲಿ ಮನೆಯಿಂದ ಹೊರಟಿದ್ದ ಪಾಪ ಇವನ ಸೊಸೆಯೂ ಆ ವಿಚಾರದಲ್ಲಿ ನಿಸ್ಸಹಾಯಕಲಾಗಿದ್ದಳು. ಗಂಡನ ಮೇಲಿನ ಭಯ ಮಾವನ ಮೇಲಿನ ಕರುಣೆಯನ್ನು ಮುಚ್ಚಿ ಹಾಕಿತ್ತು.


ಈ ಸಮಯದಲ್ಲಿ ಗೌರಮ್ಮನ ಖಾನವಳಿಯಲ್ಲಿ ಆಶ್ರಯ ಪಡೆದ. ಆ ಖಾನಾವಳಿಯ ಒಡತಿ ಗೌರಿ ಅಲ್ಲೇ ಇವನಿಗೊಂದು ಕೊಣೆ ಕೊಟ್ಟಿದ್ದಳು. ಮಾರಾಟವಾಗದೆ ಉಳಿದಿದ್ದ ಕರ್ಚೀಪುಗಳನ್ನು ತಾನು ಕೂಡಿಟ್ಟಿದ್ದ ಸ್ವಲ್ಪ ಹಣದಿಂದ ಖರೀದಿಸಿದ, ಕಸೂತಿ ಮಾಡಿ ಸಾಲುಗಳನ್ನು ಬರೆದು ಮಾರತೊಡಗಿದ. ಹುಟ್ಟಾ ಸ್ವಾಭಿಮಾನಿಯಾದ ಇವನು ಈ ಹಣದಿಂದಲೇ ಜೀವನ, ಬಾಡಿಗೆ ಎಲ್ಲವೂ ಸಾಗಿಸುತ್ತಿದ್ದ.


ಆ ದಿನ ಅವನಿಗೆ ಬಹಳ ಸಂತಸದ ದಿನವಾಗಬೇಕಿತ್ತು ತಾನು ಕೊಂಡುಕೊಂಡ ಕರ್ಚೀಪುಗಳ ಕೊನೆಯ ಲಾಟ್ ಮಾರಾಟವಾಗಿತ್ತು. ಅವನಿಗೆ ಉತ್ತಮ ಲಾಭ ಸಿಕ್ಕಿತ್ತು.

ಆದರೆ ಆಗಲೇ ಹೇಳಿದ ಹಾಗೆ ಬದುಕೊಂದು ಸುಂದರ ಕ್ರೌರ್ಯ, ಇವನು ಖಾನಾವಳಿಗೆ ಬರುವ ದಾರಿಯಲ್ಲಿ ಜನಜಂಗುಳಿಯ ನಡುವೆ ಇವನ ಸಂಪಾದಿತ ಹಣವನ್ನು ಯಾರೋ ಫಿಕ್ಪಾಕೆಟ್ ಮಾಡಿದ್ದರು. ಕೋಣೆಗೆ ಮರಳಿದ ಇವನಿಗೆ ಅವನ ಅಂದಿನ ಸೋಲನ್ನು ನೆನೆದು ಕಣ್ಣೀರು ಉಕ್ಕಿ ಬಂತು. ಎಲ್ಲ ಕರ್ಚೀಪು ಮಾರಾಟವಾಗಿದ್ದವು. ಜಗದ ಕಣ್ಣೀರು ಒರೆಸಲು ಕರವಸ್ತ್ರ ಮಾರುವ ಇವನಿಗೆ ತನ್ನ ಕಣ್ಣೀರನ್ನು ಒರೆಸುವ ಕರ್ಚೀಪು ಇಲ್ಲದಾಗಿತ್ತು


ಖಾನವಳಿಯಲ್ಲಿ ಊಟ ಮುಗಿಸಿ ಕೈ ಒರೆಸಲು ಜೇಬು ತಡಕಾಡಿದಾಗ ಬೇಸರವಾಗಿ ಸಾಲುಗಳಿರದ ಖಾಲಿ ಟಿಶೂ ಪೇಪರ್ ಇವನನ್ನು ಅಣಕಿಸುವಂತಾಗಿತ್ತು. ಬೇಕಿದ್ದಷ್ಟು ಬಳಸಿ ಬಿಸುಟವೇ ಸಮಾಜದ ರೀತಿಯಲ್ಲೇ ಟಿಶೂ ರೂಪುಗೊಂಡಿದೆ. ಬಿಕ್ಕಿದ ದುಃಖವನ್ನು ಜೇಬಲ್ಲಿರಿಸುವ ಧೈರ್ಯವೂ ಇಲ್ಲ. ಆದನ್ನು ತೊಳೆದು ಬಳಸುವ ಸಂಯಮವೂ ಇಲ್ಲ. ಎಲ್ಲವನ್ನೂ ಕ್ಷಣದಲ್ಲೇ ಒರೆಸಿ ಬಿಸುಟುವ ಹಾಳು ಆತುರ.


ಖಾನಾವಳಿಯಲ್ಲಿ ಕುಸಿದು ಕೂತ ಇವನ ಮುಂದೆ ಒಬ್ಬ ಬಂದು ಕೂತ. ತಲೆ ಎತ್ತಿದ ವೃದ್ಧನ ಮುಂದೆ ಅವನ ಸುಪುತ್ರ ನಿಂತಿದ್ದ "ಅಪ್ಪ ನಿನಗಾಗಿ ಎಷ್ಟು ಹುಡುಕಿದೆ ಗೊತ್ತಾ, ತಪ್ಪಾಯ್ತು ಅಪ್ಪ ಕೆಲವು ದಿನಗಳ ಹಿಂದೆ ಒಬ್ಬ ವೃದ್ಧನ ಬಗ್ಗೆ ಮೊಬೈಲಿನಲ್ಲಿ ಕಥೆ ಓದಿದೆ ನನಗೆ ತುಂಬಾ ಪಶ್ಚತ್ತಾಪವಾಯಿತು. ಆ ಕಥೆಯಲ್ಲಿ ಪಾಪ ಆ ಅಜ್ಜ ಬದುಕೋಕ್ಕೋಸ್ಕರ ಕರ್ಚೀಪುಮಾರುತ್ತಿದ್ದನಂತೆ. ನನಗೆ ನೀನು ಎಲ್ಲಿದ್ದೀಯೋ ಹೇಗಿದ್ದಿಯೋ ಅಂತ ಆತಂಕ ಆಗಿತ್ತು.


" ಅಪ್ಪ ಕ್ಷಮಿಸು, ಮನೆಗೆ ಬಂದುಬಿಡು "ಅಂತ ಕೈ ಹಿಡಿದು ಕೇಳಿದ್ದ  "ಅವಳು ಹೇಳಿದಾಗ ಅರ್ಥ ಆಗ್ಲಿಲ್ಲ ಈಗ ಗೊತ್ತಾಗ್ತಾ ಇದೆ"


ಅಜ್ಜನಿಗೆ ಆನಂದ ಭಾಷ್ಪ ಹರಿದಿತ್ತು. ಇವನ ಕೈಗೊಂದು ಕರ್ಚಿಪಿತ್ತ ಅವನ ಮಗ 'ಕಣ್ಣೀರು ಕರವಸ್ತ್ರಕ್ಕಿರಲಿ, ನಗು ನಿನ್ನ ಮೊಗದಲ್ಲಿರಲಿ ಎಂಬ ಕಸೂತಿ ಕುಸುರಿ ಮಾಡಿದ ಸಾಲು.


"ಈ ಕರ್ಚೀಪ್ ಎಲ್ಲಿಂದ ಸಿಗ್ತು?.." ಅಂತ ಕೇಳಿದ ವೃದ್ಧನಿಗೆ


"ಅಪ್ಪ ಆ ಕರ್ಚೀಪ್ ನನಗೆ ಒಬ್ಬ ಗೆಲೆಯ ಉಡುಗೊರೆ ಕೊಟ್ಟಿದ್ದು. ಯಾಕೆ ಆ ಸಾಲು ಇಷ್ಟ ಆಯ್ತಾ..? ಎಂಬ ಮರುಪ್ರಶ್ನೆ ಬಂದಿತ್ತು.


" ಹಾ… ಹೌದೋ. ಆದ್ರೆ ಒಂದು ವಿಷಯ ನನ್ನ ಚಿಕ್ಕ ಬಿಸಿನೆಸ್ ಒಂದಿದೆ ಆದನ್ನು ಮುಂದುವರಿಸಲಾ?" ಅಂತ ಕೇಳಿದ್ದ.


"ಆಗಬಹುದು ಅಪ್ಪ, ನಿನ್ನನ್ನು ಖುಷಿಯಿಂದ ನೋಡ್ಕೊಳ್ಳೋದು ನನ್ನ ಜವಾಬ್ದಾರಿ, ಹೇಳು ಏನದು ಬಿಸಿನೆಸ್, ಏನು ಮಾಡ್ತಿದ್ದೆ ಇಷ್ಟು ದಿನ?" ಅಂತ ಉತ್ಸುಕನಾಗಿದ್ದ ಮಗನನ್ನು

"ಮನೆಗೆ ಹೋಗೋಣ ಎಲ್ಲ ಕಥೆ ಹೇಳ್ತಿನಿ " ಎಂದು ತಮ್ಮ ಮನೆಗೆ ಹೊರಟರು

Write a comment ...

Hemanth Londhe

Show your support

ಬರಹಗಳನ್ನು ಬೆಂಬಲಿಸಲು

Write a comment ...