ಸಂದೀಪನು ತನ್ನ ಹೊಸ ಪ್ರಬಂಧಕ್ಕಾಗಿ ಪ್ರಖ್ಯಾತ ವಿಜ್ಞಾನಿಯಾದ ಡಾ||ಕೃಷ್ಣಮೂರ್ತಿಯವರೊಂದಿಗಿದ್ದನು. ಆಗಲೇ ಎರಡು ದಿನಗಳು ಅವರೊಂದಿಗೆ ಕಳೆದಿದ್ದರಿಂದ ಈ ವಿಜ್ಞಾನಿ ಬಹುದೊಡ್ಡ ಮೇಧಾವಿ ಜೊತೆಗೆ ಊಟ ನಿದ್ರೆಗಳ ಪರಿವೆಯಿರದ ಅರೆಹುಚ್ಚ ಎಂದು ತಿಳಿಯತೊಡಗಿತ್ತು. ಸಂದೀಪನಿಗೆ ಚಿರಂಜೀವಿತ್ವದ ಬಗ್ಗೆ ಲೇಖನ ತಯಾರಿಸಬೇಕಿದ್ದರಿಂದ ಜೀವ ವ್ಯವಸ್ಥೆಯ ಸಂಪೂರ್ಣ ಅರಿವು ಪಡೆಯಲು ಕೃಷ್ಣಮೂರ್ತಿಯವರೊಂದಿಗಿದ್ದನು.
ವಿಜ್ಞಾನಿ ತಮ್ಮ ಸಂಶೋಧನೆಗೆ ಬೇಕಾದ ಹೊತ್ತಗೆ ತೆರೆದು ಕುಳಿತಾಗ
" ಸರ್ ಹುಟ್ಟಿದ ಎಲ್ಲ ಜೀವಕ್ಕೂ ಸಾವಿದೆಯಲ್ಲ, ಅದು ಹೇಗೆ ಚಿರಂಜೀವಿಗಳಿಗೆ ಸಾವಿಲ್ಲ? "
"ಜೀವಿ ಅಂತ ಹೇಳೋದಾದ್ರೆ ಸಾವಿದೆ ನಿಜ ಆದರೆ ಅದು ಒಂದು ತಲೆಮಾರಿನ ಅಸ್ತಿತ್ವ ಅಂತ ಮಾತ್ರ ಹೇಳಬಹುದು ಉದಾಹರಣೆಗೆ ಬ್ಯಾಕ್ಟಿರಿಯಾಗಳಲ್ಲಿ ಒಂದೇ ಕೋಶ ವಿಂಗಡಣೆಯಾಗಿ ಅದು ಮತ್ತೆ ಮತ್ತೆ ವಿಘಟನೆ ಹೊಂದಿ ಸಂತತಿ ಹೆಚ್ಚಿಸುತ್ತವೆ, ನಮ್ಮ ಜೀವಕೋಶಗಳು ಅದೇ ರೀತಿ ವರ್ತಿಸಿ ಅಂಗಾಗಗಳನ್ನು ರೂಪಿಸುತ್ತಾವೆ . ಅಂದರೆ ಮಾತೃ ಕೋಶಕ್ಕೆ ಕೊನೆ ಎಂಬುದೇ ಇಲ್ಲ ಎಂದಾಯಿತು, ಯಾವುದಾದರೂ ಒಂದು ರೂಪದಲ್ಲಿ ಅದು ಯಾವಾಗಲೂ ಸ್ಥಿತವಾಗಿರುತ್ತದೆ. ಅಷ್ಟಕ್ಕೂ ನಮ್ಮ ಪ್ರಾಣಕ್ಕೆ ಪ್ರತಿ ಜೀವಕೋಶವು ಒಂದು ಅಂಶರೂಪ ಪ್ರತಿಕ್ಷಣವೂ ಹಲವು ಜೀವಕೋಶಗಳು ಸಾಯುತ್ತಲಿರುತ್ತವೆ ಆದರೆ ನಮ್ಮ ಪ್ರಾಣಕ್ಕೆ ಅದು ತಿಳಿಯುವುದೇ ಇಲ್ಲ. ಆದನ್ನು ಸಾವು ಎಂದು ಏಕೆ ಹೇಳುವುದಿಲ್ಲ?, ಅದು ನಮಗೆ ನಗಣ್ಯ ಅಷ್ಟೇ ಹಾಗೆ ನೋಡಿದರೆ ನಾವು ಪ್ರತಿಕ್ಷಣವೂ ಸಾಯುತ್ತಿರುತ್ತೇವೆ ಬದುಕುತ್ತಿರುತ್ತೇವೆ " ಇಷ್ಟನ್ನು ಹೇಳಿ ಉತ್ತರವನ್ನು ನೀನೇ ಕಂಡುಕೊ ಎಂಬ ತೀಕ್ಷ ದೃಷ್ಟಿಯಲ್ಲಿ ನೋಡುತ್ತಿದ್ದರು ಕೃಷ್ಣಮೂರ್ತಿ
ವೈಜ್ಞಾನಿಕ ಮಂಥನವೊಂದು ಅಧ್ಯಾತ್ಮದ ಬೆನ್ನುಹುರಿ ಹೊಂದಿ ಬಲ ಪಡೆಯುತ್ತಿರುವ ಸೂಚನೆ ಸಂದೀಪನಿಗೆ ಸಿಕ್ಕಿತ್ತು.
"ಸರಿ ಅವರು ಒಂದು ರೂಪದಲ್ಲಿ ಬದುಕಿದ್ದಾರೆ ಎಂಬುದಾಗೇ ಇಟ್ಟುಕೊಂಡರೆ ಹಾಗಿದ್ದರೆ ಆ ಚಿರಂಜೀವಿಗಳು ಈಗ ಎಲ್ಲಿದ್ದಾರೆ? ನಿಮಗೇನನ್ನಿಸುತ್ತದೆ?"
"ನೀನು ಕಣ್ಣಿಗೆ ಕಾಣುವ ಉದ್ದ, ಅಗಲ ಎತ್ತರಗಳ ಲೆಕ್ಕದಲ್ಲಿ ಹೇಳುವುದಾದರೆ ಅವರು ಎಲ್ಲಿದ್ದಾರೆ ಎಂಬುದು ನನಗೆ ಪುರಾವೆ ಸಹಿತ ಗೊತ್ತಿಲ್ಲ, ಆದರೆ ಈ ಲೋಕದಲ್ಲಿ Space ,ಕಾಲ ಸೇರಿದಂತೆ ಇತರೆ ಹನ್ನೊಂದು ಆಯಾಮಗಳಲ್ಲಿ ನೋಡುವುದು ಸಾಧ್ಯವಾದರೆ ಬಹುಷಃ ಅವರು ಕಾಣಬಹುದು. ನೀನು ಸಮಯ ಎಂದು ಕರೆಯುವುದು cesium ಎಂಬ ಅಣುವಿನ ಎಲೆಕ್ಟ್ರಾನ್ ಚಲನೆಯ ಮೇಲೆ ಚಿತ್ರಿಸಿದ್ದು ಅದೊಂದು ಮಾಪಕ, ಕಾಲಕ್ಕೆ ಅದೇ ಮಾನದಂಡ ಅನ್ನೋದು ಮನುಜರ ನಿಲುವು. ಅದರ ಮೇಲೆ ಅವಲಂಬಿತವಾದ Space ಒಂದು ಸಮಯಕ್ಕಷ್ಟೇ ಪ್ರಚಲಿತ. ನಿನ್ನ ಕೈಯಲ್ಲಿನ ಗಡಿಯಾರ ನಾವು ಮಂಗಳ ಗ್ರಹಕ್ಕೆ ಹೋದರು ಗಂಟೆ ತೋರಿಸೀತು ಆದರೆ ಅದು ಅಲ್ಲಿಗೆ ಸಮಂಜಸವಾಗಲಾರದು ಅಲ್ಲಿನ ಹಗಲು ರಾತ್ರಿಗಳೇ ಬೇರೆ. ಹೀಗಿರುವಾಗ ಈ ಸಮಯ ಹಾಗೂ ಈ ಕಾಲಮಾನ ಎಂದು ಹೇಳುವುದರಲ್ಲಿ ನಮ್ಮ ಭ್ರಮೆ ಅಡಗಿದೆ ಅಷ್ಟೇ". ದೀರ್ಘ ಉತ್ತರದ ನಂತರ ನಿಟ್ಟುಸಿರು ಬಿಟ್ಟರು ಡಾಕ್ಟರ್ ಕೃಷ್ಣಮೂರ್ತಿ
"ಹಾಗಾದರೆ ಆ ಸಿದ್ಧಾಂತಗಳನ್ನು ನಮಗೆ ಹೋಲಿಸಿದರೆ ನಾವೂ ಚಿರಂಜೀವಿಗಳೇ?"
"ಹೌದು, ಆದರೆ ನಮ್ಮ ಅನುಭವಕ್ಕೆ ಅದು ಬರಲು ಈ ದೈಹಿಕ ಕಕ್ಷೆಯನ್ನು ಬಿಟ್ಟು ಎಂದರೆ ನಮ್ಮ ನೆನಪು ಸಂವೇದನೆ ಗಳನ್ನು ಹೊರತುಪಡಿಸಿ ಅನುಭವಿಸಲು ಸಾಧ್ಯವಿಲ್ಲ. ನಾವು ಈ ಇಂದ್ರಿಯ ಬಂಧಿತರು. ಆ ಚಿರಂಜೀವಿಗಳು ಈ ದೇಹವನ್ನು ಮೀರಿ ಇರಬಲ್ಲರು ಮತ್ತು ಅನುಭವಿಸಬಲ್ಲರು ಬಹುಷಃ ಆ ಅಜ್ಞಾತ ಶಕ್ತಿ ಅವರಿಗಿದೆ.,ನಮಗಿಲ್ಲ ನಮ್ಮ ಚಿರಂಜೀವಿತ್ವ ಅನುಭವಕ್ಕೆ ದಕ್ಕುವುದಿಲ್ಲ.. ಅಷ್ಟಕ್ಕೂ ವಿಜ್ಞಾನದ ಶಕ್ತಿಸಿದ್ಧಾಂತದ ಪ್ರಕಾರ ಶಕ್ತಿಯನ್ನು ಉತ್ಪಾದಿಸಲಾಗಲಿ, ನಾಶಪಡಿಸಲಾಗಲಿ ಅಸಾಧ್ಯ ಅದು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದು ಅಷ್ಟೇ, ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಸಾರಿಲ್ಲವೇ 'ಅಗ್ನಿಯು ನಿನ್ನನ್ನು ಸುಡಲಾರದು, ನೀರು ತೋಯಿಸಲಾರದು ' ಅದು ಆತ್ಮಕ್ಕೆ ಸಂಬಂಧಿಸಿದ್ದಾದರೂ ಅದೂ ನಾವೇ ಅಲ್ಲವೇ? "
ಪ್ರಶ್ನೆಗೆ ಪ್ರಶ್ನೆಯ ಮೂಲಕ ಉತ್ತರಿಸಿದ್ದರು ವಿಜ್ಞಾನಿ
ಸಂದೀಪನಿಗೆ ಎಲ್ಲಾ ಸತ್ಯ ಎನಿಸಿದ್ದರೂ ಅವನ ತರ್ಕವನ್ನು ವಿಷಯ ಮೀರಿದ್ದರಿಂದ ಹೌದು ಎಂಬಂತೆ ತಲೆ ಅಲ್ಲಾಡಿಸಿದ. ವಿಜ್ಞಾನಿಗಳು ತರ್ಕಬದ್ಧ ವಿಜ್ಞಾನವನ್ನು ಅರುಹುತ್ತಿದ್ದಾರೋ, ತರ್ಕವಿಹಿತ ಆಧ್ಯಾತ್ಮ ಮಾತಾಡುತ್ತಿದ್ದಾರೋ ತಿಳಿಯದಾಗಿತ್ತು ಅವನಿಗೆ.
ಸಂದೀಪನಿಗೆ ಮುಂದಿನ ಪ್ರಶ್ನೆ ಕೇಳುವ ಬದಲು ಈ ಪ್ರಬಂಧಕ್ಕೆ ತಿಲಾಂಜಲಿ ಇಡುವುದೇ ಸೂಕ್ತ ಎಂದೆನಿಸಿ
"ಎರಡು ದಿನಗಳು ನನಗಾಗಿ ನೀಡಿದ್ದಕ್ಕಾಗಿ ಧನ್ಯವಾದಗಳು, ತುಂಬಾ ಸಹಾಯವಾಯಿತು ನಿಮ್ಮಿಂದ, ಹೋಗಿಬರಲೇ "
ವಿಜ್ಞಾನಿ ನಸುನಕ್ಕು "ಹೋಗಿಬನ್ನಿ, ಇವರೆ,ವಿಜ್ಞಾನ ಮತ್ತು ಅದರ ದಿನ ದಿನಕ್ಕೂ ಹೊಸತಾಗುತ್ತಿರುತ್ತವೆ, ಯಾರಿಗೆ ಗೊತ್ತು ಇಂದಿನ ಸಿದ್ಧಾಂತ ನಾಳೆ ಸುಳ್ಳಾಗಬಹುದು, ಹಾಗಾದಾಗ ಮತ್ತೆ ಸಿಗೋಣ " ಎಂದು ಕಳುಹಿಸಿಕೊಟ್ಟರು
ಶಹರದ ಜಂಜಡಗಳಿಂದ ಸ್ವಲ್ಪವೇ ಹೊರಗಿದ್ದ ಒಂಟಿ ಮನೆಯಿಂದ ಹೊರಟ ಸಂದೀಪ್.
********
"ಮಾಯಾ ಏನ್ ಹೇಳ್ತಾ ಇದ್ದೀಯ?, ನಾನು ಎರಡು ದಿನ ಅವರ ಜೊತೆಗೆ ಅವರ ಮನೆಯಲ್ಲೇ ಇದ್ದೇ…."ಸಂದೀಪನ ತಲೆ ಮತ್ತೂ ಚಿಟ್ಟು ಹಿಡಿದಿತ್ತು.
"ಸಂದೀಪ್, ಅವರು ತೀರಿಹೋಗಿ ಮೂರು ವರ್ಷಗಳಾದವು. ಅಷ್ಟಕ್ಕೂ ಅವರ ಮನೆಯ ಜಾಗ ಮಾರಾಟವಾಗಿ ಆ ಮನೆಯನ್ನೂ ಕೆಡವಿ ಹಾಕಿದ್ದಾರೆ ಈಗ ಅಲ್ಲೊಂದು ಅಪಾರ್ಟ್ಮೆಂಟ್ ಆಗ್ತಾ ಇದೆ, ನೀನು ಆಫೀಸ್ಗೆ ಬರ್ಲಿಲ್ಲ ಅಂತ ಎಡಿಟರ್ ಗರಂ ಆಗಿದ್ರು ನೀನು ಫೋನ್ ಕೂಡ ಎತ್ತಲಿಲ್ಲ ಅಂತಿದ್ರು ಈ ಸುಳ್ಳನ್ನ ಅವರ ಮುಂದೆ ಹೇಳಬೇಡ" ಕಿಚಾಯಿಸಿದಳು ಮಾಯಾ "
"ನಾನೇ ಈ ವಿಷಯಕ್ಕೆ ಸಂಪೂರ್ಣ ಏಕಾಗ್ರತೆ ಕೊಡಬೇಕು ಅಂತ ಫೋನ್ ಬಿಟ್ಟು ಹೋಗಿದ್ದೆ, ಅದರಿಂದ ಬಹಳ ವಿಷಯ ಸಿಕ್ತು ಕೂಡ, ಅರ್ಥಮಾಡ್ಕೋ…."
"ಸರಿ ಸರಿ ಹಾಗಿದ್ರೆ ಎರಡು ದಿನ ಇದ್ಯಲ್ಲ, ಏನು ಬರ್ಕೊಂಡೆ ಪುಸ್ತಕ ಕೊಡು, ಟೈಪ್ ಮಾಡಿದ ಡಾಕ್ಯುಮೆಂಟ್ ತೋರಿಸು, Atleast ಎರಡು ದಿನ ಆ ಸತ್ತ ವಿಜ್ಞಾನಿ ಜೊತೆ ಏನು ಮಾತಾಡಿದೆ ಅದನ್ನಾದ್ರೂ ಹೇಳು "
ಸಂದೀಪನಿಗೆ ಅಲ್ಲೋಲ ಕಲ್ಲೋಲವಾಯಿತು .ತನ್ನ ಬಳಿ ಆ ವಿಷಯಕ್ಕೆ ಸಂಬಂಧಿಸಿದ ಒಂದು ಚೀಟಿಯೂ ಇರಲಿಲ್ಲ. ತಾನು ಅಲ್ಲಿಗೆ ಹೋಗಿದ್ದೆ ಎಂಬುದನ್ನು ಸಾಬೀತು ಪಡಿಸಲು ಯಾವ ಪುರಾವೆಯೂ ಅವನ ಬಳಿ ಇರಲಿಲ್ಲ. ತನಗೆ ಕೊನೆಯದಾಗಿ ಮಾತಾಡಿದ್ದು ನೆನಪಿದೆ ಬಿಟ್ಟರೆ ಎರಡು ದಿನಗಳ ಉಳಿದ ಸಮಯದಲ್ಲಿ ಏನು ನಡೆಯಿತೆಂದು ಚಿತ್ತಕ್ಕೆ ಬರಲಿಲ್ಲ.
ಸಂದೀಪ ಮೂಕನಾದ.
"ಸಂದೀಪ್ ಎಡಿಟರ್ ಸರ್ ಗೆ ಸಂಜೆ ಒಳಗೆ ಏನಾದರು ಬರೆದು ಕೊಡು, ರಜೆಗೊಂದು ಏನಾದರೂ ಕಾರಣ ನೀಡು. ಆದರೆ ನನಗನ್ನಿಸುತ್ತೆ ನಿನಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಸ್ವಲ್ಪ ಬ್ರೇಕ್ ತಗೊಂಡ್ರೆ ಒಳ್ಳೇದು, Take care " ಎಂದು ಎದ್ದು ಹೊರಟಳು ಸಹವರ್ತಿ ಮಾಯಾ.
ಸಂದೀಪ ತನಗೆ ನೆನಪಿದ್ದ ವಿಷಯಗಳ ಗೂಗಲಿಸಿ ನೋಡಿದ ಅವರು ಹೇಳಿದ್ದ ವಿಷಯಗಳಲ್ಲಿ ಒಂಚೂರು ಸುಳ್ಳಿರಲಿಲ್ಲ ಆದರೆ ಅವರೇ ಇಲ್ಲವಾದರೆ ನಾನು ಕಂಡದ್ದು ಯಾರನ್ನು? ಎಂದು ಯೋಚಿಸಲು ಕಣ್ಣು ಮುಚ್ಚಿದಾಗ ಅದೇ ಹಳೆಯ ಆಯಾಮಗಳು, ಸಾವಿದ್ದರೂ ನಶಿಸದ ಜೀವಕೋಶ, ಆತ್ಮ, ಶಕ್ತಿ ಸಿದ್ಧಾಂತ, ಚಿರಂಜೀವಿತ್ವ …
ಮುಕ್ತಾಯ*
Write a comment ...