ಸೀತಾಪುರದ ಕಲ್ಲಿನ ಜೋಪಡಿ
ಸೀತಾಪುರ!..ಈ ಊರಿಗೆ ಅಂತಹ ಹೆಸರು ಬರಲೂ ಕಾರಣವಿದೆ. ಊರಿನ ಈಶಾನ್ಯ ಭಾಗದಲ್ಲಿ ಒಂದು ಕಲ್ಲಿನ ಜೋಪಡಿಯಿದೆ. ಅಲ್ಲಿ ಸೀತಾ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ ಇಲ್ಲಿ ಕೆಲವು ಕಾಲ ತಂಗಿದ್ದರಂತೆ, ಪಕ್ಕದಲ್ಲಿರುವ ಕೆರೆಯ ನೀರನ್ನೇ ಅವರು ಬಳಸುತತ್ತಿದ್ದರಂತೆ. ಅಲ್ಲೊಂದು ಶಿವಾಲಯವಿದೆ, ಆ ಶಿವನನ್ನು ರಾಮನು ಪೂಜಿಸುತಿದ್ದನಂತೆ ಹಾಗಾಗಿ ಆ ದೇವಸ್ಥಾನದ ಹೆಸರು 'ರಾಮೇಶ್ವರ ದೇವಸ್ಥಾನ' ಎಂದಾಯಿತಂತೆ. ರಾಮಾಯಣದ ಕಾಲದಲ್ಲಿ ಅದು ಚಿಕ್ಕ ಗುಡಿಯಾಗಿದ್ದಿರಬಹುದಷ್ಟೇ, ತಮ್ಮ ಹಿರಿಕರು ಎಂದರೆ ಹಿಂದಿನ ೪ನೆಯ ಅಥವಾ ೫ನೆಯ ತಲೆಮಾರಿನಲ್ಲಿದ್ದ ಈ ಊರಿನ ದಳಪತಿಯೊಬ್ಬ ಯುದ್ಧದಲ್ಲಿ ಆಸೀಮ ಶೌರ್ಯ ಪರಾಕ್ರಮಗಳನ್ನು ಮೆರೆದದ್ದಕ್ಕಾಗಿ ರಾಜನು ಸಂತುಷ್ಟಗೊಂಡು ದಳಪತಿಯ ಆಸೆಯೇನಾದರೂ ಇದ್ದರೆ ಈಡೇರಿಸುವ ಮಾತು ಕೊಟ್ಟಾಗ, ದಳಪತಿಯು ತನ್ನ ಹುಟ್ಟೂರಿನ ದೇವಸ್ಥಾನವನ್ನು ಅಭಿವೃದ್ಧಿ ಮಾಡುವಂತೆ ಕೇಳಿಕೊಂಡನಂತೆ, ಅದರ ಫಲವಾಗಿ ದೇವಳಕ್ಕೆ ಮೂರು ಸುತ್ತಿನ ಪ್ರಾಂಗಣ,ಧ್ವಜಸ್ತಂಭ, ರಥ ಮುಂತಾದ ಸವಲತ್ತುಗಳು ದೊರಕಿತಂತೆ. ಇಂತಹ ವಿಚಾರಗಳ ಲಿಖಿತ ಶಾಸನ ಇಲ್ಲವಾದರೂ, ಇವುಗಳ ವಾಸ್ತವತೆಯನ್ನು ಕಂಡ ಕಣ್ಣುಗಳಿಲ್ಲದಿದ್ದರೂ ಕೂಡ, ಈ ವಿಷಯಗಳನ್ನು ಕಲ್ಪಿಸಿಕೊಳ್ಳಲು ಇರಲೇಬೇಕಾದ ಅವಶ್ಯಕತೆಗಳು ಇದ್ದುದ್ದರಿಂದ,ಈ ಐತಿಹಾಸಿಕ ಪ್ರಸಂಗಗಳಲ್ಲಿ ಯಾವುದೇ ನ್ಯೂನತೆಗಳು ಕಾಣಲಿಲ್ಲವಾದ್ದರಿಂದ ಸಕಲ ಗ್ರಾಮಸ್ಥರು ಇದನ್ನೇ ನಂಬುತ್ತಾರೆ ಹಾಗೂ ಹೊರಗಿನ ಜಗತ್ತಿಗೂ ಈ ದೃಷ್ಟಿಕೋನದ ಸತ್ಯವನ್ನೇ ಹೇಳುತ್ತಾರೆ.
Write a comment ...