ಸೀತಾಪುರದ ಕಲ್ಲಿನ ಜೋಪಡಿ 

ಸೀತಾಪುರ!..ಈ ಊರಿಗೆ ಅಂತಹ ಹೆಸರು ಬರಲೂ ಕಾರಣವಿದೆ. ಊರಿನ ಈಶಾನ್ಯ ಭಾಗದಲ್ಲಿ ಒಂದು ಕಲ್ಲಿನ ಜೋಪಡಿಯಿದೆ. ಅಲ್ಲಿ ಸೀತಾ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ ಇಲ್ಲಿ ಕೆಲವು ಕಾಲ ತಂಗಿದ್ದರಂತೆ, ಪಕ್ಕದಲ್ಲಿರುವ ಕೆರೆಯ ನೀರನ್ನೇ ಅವರು ಬಳಸುತತ್ತಿದ್ದರಂತೆ. ಅಲ್ಲೊಂದು ಶಿವಾಲಯವಿದೆ, ಆ ಶಿವನನ್ನು ರಾಮನು ಪೂಜಿಸುತಿದ್ದನಂತೆ ಹಾಗಾಗಿ ಆ ದೇವಸ್ಥಾನದ ಹೆಸರು 'ರಾಮೇಶ್ವರ ದೇವಸ್ಥಾನ' ಎಂದಾಯಿತಂತೆ. ರಾಮಾಯಣದ ಕಾಲದಲ್ಲಿ ಅದು ಚಿಕ್ಕ ಗುಡಿಯಾಗಿದ್ದಿರಬಹುದಷ್ಟೇ, ತಮ್ಮ ಹಿರಿಕರು ಎಂದರೆ ಹಿಂದಿನ ೪ನೆಯ ಅಥವಾ ೫ನೆಯ ತಲೆಮಾರಿನಲ್ಲಿದ್ದ ಈ ಊರಿನ ದಳಪತಿಯೊಬ್ಬ ಯುದ್ಧದಲ್ಲಿ ಆಸೀಮ ಶೌರ್ಯ ಪರಾಕ್ರಮಗಳನ್ನು ಮೆರೆದದ್ದಕ್ಕಾಗಿ ರಾಜನು ಸಂತುಷ್ಟಗೊಂಡು ದಳಪತಿಯ ಆಸೆಯೇನಾದರೂ ಇದ್ದರೆ ಈಡೇರಿಸುವ ಮಾತು ಕೊಟ್ಟಾಗ, ದಳಪತಿಯು ತನ್ನ ಹುಟ್ಟೂರಿನ ದೇವಸ್ಥಾನವನ್ನು ಅಭಿವೃದ್ಧಿ ಮಾಡುವಂತೆ ಕೇಳಿಕೊಂಡನಂತೆ, ಅದರ ಫಲವಾಗಿ ದೇವಳಕ್ಕೆ ಮೂರು ಸುತ್ತಿನ ಪ್ರಾಂಗಣ,ಧ್ವಜಸ್ತಂಭ, ರಥ ಮುಂತಾದ ಸವಲತ್ತುಗಳು ದೊರಕಿತಂತೆ. ಇಂತಹ ವಿಚಾರಗಳ ಲಿಖಿತ ಶಾಸನ ಇಲ್ಲವಾದರೂ, ಇವುಗಳ ವಾಸ್ತವತೆಯನ್ನು ಕಂಡ ಕಣ್ಣುಗಳಿಲ್ಲದಿದ್ದರೂ ಕೂಡ, ಈ ವಿಷಯಗಳನ್ನು ಕಲ್ಪಿಸಿಕೊಳ್ಳಲು ಇರಲೇಬೇಕಾದ ಅವಶ್ಯಕತೆಗಳು ಇದ್ದುದ್ದರಿಂದ,ಈ ಐತಿಹಾಸಿಕ ಪ್ರಸಂಗಗಳಲ್ಲಿ ಯಾವುದೇ ನ್ಯೂನತೆಗಳು ಕಾಣಲಿಲ್ಲವಾದ್ದರಿಂದ ಸಕಲ ಗ್ರಾಮಸ್ಥರು ಇದನ್ನೇ ನಂಬುತ್ತಾರೆ ಹಾಗೂ ಹೊರಗಿನ ಜಗತ್ತಿಗೂ ಈ ದೃಷ್ಟಿಕೋನದ ಸತ್ಯವನ್ನೇ ಹೇಳುತ್ತಾರೆ.


ಇಂತಿಪ್ಪ ಸೀತಾಪುರದ ಮಹಿಮೆಯನ್ನು ಮುಂಚೆಯೆಲ್ಲ ಸುತ್ತಲಿನ ಕೆಲವು ಗ್ರಾಮದವರಷ್ಟೇ ಸ್ಮರಿಸುತ್ತಿದ್ದರು. ಆದರೆ ಇತ್ತೀಚೆಗೆ ಜಾಲತಾಣದ ಭರಾಟೆಯಲ್ಲಿ ಈ ಸ್ಥಳ ಮಹಾತ್ಮೆಯು ಮಲೆನಾಡು, ಅರೆಮಲೆನಾಡು ಸೀಮೆಗಳನ್ನೂ ದಾಟಿ ಬೆಂಗಳೂರಿನಂತಹ ಶಹರಗಳಿಗೂ ಮುಟ್ಟಿತು. ಈ ರೀತಿಯ ಪ್ರಚಾರದಿಂದಾಗಿ ವಾರದ ಕೊನೆಯ ದಿನಗಳಲ್ಲಿ ಪ್ರವಾಸಿಗರ ಆಗಮನ ಪ್ರಾರಂಭವಾಯಿತು. ಈ ರೀತಿಯ ಬದಲಾವಣೆ- ಬೆಳವಣಿಗೆಗಳನ್ನು ಕಂಡ ಗ್ರಾಮ ಪಂಚಾಯತಿಯ ಮೆಂಬರಾದ ಲಂಕೇಶನು ಊರಿನ ದಾರಿಯ ಬದಿಯಲ್ಲಿ ಒಂದು ಅಂಗಡಿಯನ್ನು ಹಾಕಿದನು. ಮೊದಮೊದಲು ಕಾಫಿ, ತಿಂಡಿ, ಬಿಸ್ಕತ್ತಿನಲ್ಲಿದ್ದ ವಹಿವಾಟು ಬೀಡಿ, ಸಿಗರೇಟು, ಅಕ್ರಮ ಮದ್ಯವನ್ನು ಮಾರುವಷ್ಟು ದೊಡ್ಡದಾಯಿತು.


ಸೀತಾಪುರ ಮಲೆನಾಡ ಜಾಗವಾದ್ದರಿಂದ ಹತ್ತಿರದಲ್ಲೇ ವೀಕ್ಷಣೀಯ ಎನ್ನುವುದಕ್ಕಿಂತ ಪ್ರೇಕ್ಷಣೀಯ ಸ್ಥಳಗಳು ಹುಟ್ಟಿಕೊಂಡವು. (ಏನಾದರೂ ಗಮನಾರ್ಹ ವಿಷಯಗಳಿದ್ದರೆ ಅದು ವೀಕ್ಷಣೀಯ,ಆದರೆ ಕೆಲವರಿಗೆ ಅಂತಹ ಅವಶ್ಯಕತೆಗಳು ಬೇಡವಾದರೂ ತಮಗೆ ಮನಬಂದಂತೆ ಇರುವ ಸ್ಥಳಗಳು ಪ್ರೇಕ್ಷಣೀಯ). ಕಾಂಕ್ರಿಟಿನ ಕಡಲಿನಲ್ಲಿ ಮುಳುಗಿರುವವರಿಗೆ, ಇಲ್ಲಿನ ಒಂದು ಹಸಿರು ಎಲೆಯೂ ಕೂಡ ಬದುಕಿನ ಕಿನಾರೆಯಾಗಿತ್ತು. ಸೀತಾಪುರದ ಮನೆಗಳು ಒಂದೊಂದಾಗಿ ಹೋಂಸ್ಟೇಗಳಾಗಿ ಮಾರ್ಪಾಡುಗೊಂಡವು. ಇದು ಸಾಕಾಗುವುದಿಲ್ಲವೆಂಬತೆ ಗುಡ್ಡ, ತೋಡುಗಳೆಲ್ಲ ಜೇಸಿಬಿ, ಹಿಟಾಚಿಗಳ ಪರಾಕ್ರಮಕ್ಕೆ ಸಪಾಟಾಗಿ ಹೊಸ ಹೋಂಸ್ಟೇಗಳು ಉದ್ಭವವಾದವು.ಪರಿಣಾಮವಾಗಿ ಇದ್ದ ಗದ್ದೆಗಳನ್ನು ಉಳುಮೆ ಮಾಡುವವರಿಲ್ಲದೆ ಅಡಕೆ, ಕಾಫಿತೋಟಗಳಾದವು. ಬಂದ ಜನರು ಮೋಜು-ಮಸ್ತಿಗಾಗಿ ಕೆರೆಯ ಬಳಿ ಕ್ಯಾಂಪ್ ಫೈರ್, ಕುಣಿತ ಕುಡಿತಗಳನ್ನು ಮಾಡಿ ಕೆರೆಯ ಸುತ್ತ ಬಾಟಲಿ ಲಕೋಟೆಗಳ ಹಾವಳಿ ಎಬ್ಬಿಸಿದರು. ಮೇವು, ನೀರಿಗಾಗಿ ಬರುತ್ತಿದ್ದ ಜಾನುವಾರುಗಳು ಬೇರೆಯ ದಾರಿ ಹಿಡಿದವು.


ಸೀತಾಪುರದ ನಿವಾಸಿಗಳು ಹೆಚ್ಚಿನ ಮಟ್ಟದಲ್ಲಿ ಈ ರೀತಿಯ ಆದಾಯದ ಮೇಲೆ ಅವಲಂಬಿತರಾದರು. ಕೆಲವು ವರ್ಷಗಳ ಕಾಲ ಎಲ್ಲವೂ ಸಸೂತ್ರವಾಗಿಯೂ, ಸುಸೂತ್ರವಾಗಿಯೂ ನಡೆಯಿತು. ಆದರೆ ಪ್ರಕೃತಿಯ ಸೂತ್ರದ ಹಿಡಿತ ಹೆಚ್ಚು ಕಡಿಮೆಯಾದರೆ ಎಲ್ಲವೂ ತಲೆಕೆಳಗಾಗುತ್ತದೆ ಎಂಬುದು ಸೀತಾಪುರದಲ್ಲಿಯೂ ಸತ್ಯವಾಯಿತು. ಅದೊಂದು ದಿನದ ಎಡೆ ಬಿಡದೆ ಸುರಿದ ಮುಸಲಧಾರೆಗೆ ರಾಮೇಶ್ವರ ದೇವಳದ ಮೇಲಿನ ದೊಡ್ಡ ಗುಡ್ಡವು ಕುಸಿದು, ಸೀತೆಯ ಕಲ್ಲಿನ ಜೋಪಡಿ ದೇವಾಲಯದ ಅವಸಾನವಾಯಿತು. ಕೆರೆಗೆ ಜೀವವಾಗಿದ್ದ ಸಣ್ಣ ತೊರೆ ಏಕಾ ಏಕಿ ಬೃಹತ್ ನದಿಯ ರೂಪ ತಳೆದು ಹರಿಯುತ್ತ ತನ್ನ ದಾರಿಯಲ್ಲಿ ಸಿಕ್ಕ ಎಲ್ಲವನ್ನೂ ನುಂಗಿಕೊಂಡು ಹೋಯಿತು. ಹಲವರ ಮನೆ,ತೋಟ  ಕೆಲವರ ಜೀವ ಜೀವನಗಳು ಕಳೆದುಹೋದವು. ಸರಕಾರ ಪರಿಹಾರಗಳನ್ನು ಒದಗಿಸಿತು. ಮರುನಿರ್ಮಾಣ ಕಾರ್ಯಗಳನ್ನು ಕೈಗೊಂಡಿತು, ಆದರೆ ಅವಸಾನವಾದ ಸೀತಾಪುರದ ಕಲ್ಲಿನ ಜೋಪಡಿಯ ಒಂದು ಕಲ್ಲೂ ಸಿಗಲಿಲ್ಲ. ದೇವಳದ ಗುಡಿ ಹಾಗೂ ಕೆಲವು ಭಾಗಗಳು ಬಿಟ್ಟು ಎಲ್ಲವೂ ಕೊಚ್ಚಿಹೋಗಿತ್ತು. ಸೀತೆಯ ಜೋಪಡಿಯಿಲ್ಲದೇ ಸೀತಾಪುರದ ಹೆಮ್ಮೆ, ಹೆಸರು ನೀರು ಪಾಲಾಗಿತ್ತು. ಪ್ರವಾಸಿಗರ ಸಂಖ್ಯೆಯು ಕ್ಷೀಣಿಸಿ ಗ್ರಾಮಸ್ಥರಲ್ಲಿ ಹಲವರ ಆದಾಯ ಇಲ್ಲವಾಗಿತ್ತು.ಜೀವನದ ಮೂಲವನ್ನೇ ಮಗುಚಿ ಮತ್ತೊಂದನ್ನು ಮಾಡುವಂತಹ ಬದಲಾವಣೆಗೆ ಸೀತಾಪುರ ಸಿದ್ಧವಾಗಬೇಕಿತ್ತು.


ಇಂತಹ ಭೀಕರ ಪರಿಸರ ಮುನಿಸಿಗೆ ಕಾರಣವೇನೆಂದು ಸಂಶೋಧಿಸಲು ಬಂದ ಸರ್ಕಾರದ ವಿಜ್ಞಾನಿಗಳ ತಂಡಕ್ಕೆ ಸಿಕ್ಕ ಉತ್ತರದ ವರದಿ ಹೀಗಿತ್ತು.

"ಸೀತಾಪುರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಸಲು ಮಾಡಿದ ಅರಣ್ಯ ನಾಶದಿಂದ ಹಾಗೂ ಯಂತ್ರೋಪಕರಣಗಳನ್ನು ಬಳಸಿ ಮಾಡಿದ ಅತಿಯಾದ ಕಾಮಗಾರಿಗಳಿಂದ ಮಣ್ಣನ್ನು ಹಿಡಿದಿಡುವ ಬೇರುಗಳು, ಬಂಡೆಗಳು ನಾಶವಾಗಿವೆ. ನೀರ ಹರಿವನ್ನು ಸಮತೋಲಿತಗೊಳಿಸುವ ಇಂತಹ ಅಂಶಗಳಿಗೆ ಅಘಾತ ಉಂಟಾಗಿದ್ದರಿಂದ, ಧಿಡೀರ್ ಸುರಿದ ದೊಡ್ಡ ಮಳೆಯ ನೀರ ಹರಿವು ತಡೆಯದೆ ಮಣ್ಣಿನ ಸವಕಳಿ ಉಂಟಾಗಿ ಗುಡ್ಡ ಕುಸಿತವಾಗಿದೆ. ಇದರ ಪರಿಣಾಮದಿಂದ ಅಂತರ್ಜಲದ ಸೆಲೆಗಳು ಸ್ಫೋಟವಾಗಿ ಪ್ರವಾಹ ಉಂಟಾಯಿತು. ಈ ಅವಘಡಕ್ಕೆ ಪ್ರಕೃತಿ ನಾಶವೇ ಮೂಲ ಕಾರಣ "


ಯಾವ ಪ್ರಕೃತಿ, ಪರಂಪರೆಗಳ ಸಹಾಯದಿಂದ ಸೀತಾಪುರ ಬದುಕುತ್ತಿತ್ತೋ, ಅವುಗಳ ದುರ್ಬಳಕೆಯಿಂದ, ಮನುಜನ ಸ್ವಾರ್ಥ ಮನಸ್ಥಿತಿಯಿಂದ ಪ್ರಕೃತಿ ಸೀತಾಪುರದ ಪರಂಪರೆಯನ್ನೇ ಅಳಿಸಿ ಹಾಕಿತ್ತು

ಭಾಗ -೨

ಲಂಕೇಶನ ಅಂಗಡಿಯ ಮಾಯಾ ಪೆಟ್ಟಿಗೆ(ಮೂರ್ಖರ ಪೆಟ್ಟಿಗೆಯಾಗಿಯಷ್ಟೇ ಇದು ಉಳಿದಿಲ್ಲ, ಬುದ್ಧಿವಂತರನ್ನೂ ತನ್ನ ಮಾಯೆಗೆ ಸಿಲುಕಿಸುವುದರಿಂದ ಇದು ಮಾಯಾ ಪೆಟ್ಟಿಗೆಯೇ ಸರಿ)ಯಲ್ಲಿ ನಾಯಕನೊಬ್ಬ ಸಿಗರೇಟ್ ಒಂದನ್ನು ಹೊತ್ತಿಸಿ. ಅದರ ಹೊಗೆಯನ್ನು ಮೆಲ್ಲನೆ ಬಿಡುತ್ತ ಕಪ್ಪು ಕನ್ನಡಕದಲ್ಲಿ ಖಳನಾಯಕನೆಡೆಗೆ ಖದರುಗಣ್ಣಿನಲ್ಲಿ ನೋಡತ್ತಿರಬೇಕಾದರೆ,ನಾಯಕನ ನೋಟಕ್ಕೆ ಹೆದರಿ ತನ್ನ ಕೈಯಲ್ಲಿರುವ ಬೀಡಿಯನ್ನು  ಮರೆತ ಖಳನಾಯಕ ಅದರಿಂದಲೇ ತನ್ನ ಕೈ ಸುಟ್ಟುಕೊಂಡ. ಹಿನ್ನೆಲೆ ಸಂಗೀತ, ನೀಲಿ-ಹಸಿರು ಬಣ್ಣಗಳ ಸಂಯೋಜನೆಯಲ್ಲಿ ಕ್ಲೋಸ್ ಅಪ್ ಕ್ಯಾಮೆರಾ ಆಂಗಲ್ ನಲ್ಲಿ ಸೆರೆಹಿಡಿದ ಆ ದೃಶ್ಯದ ಪ್ರಭಾವ ತದೇಕಚಿತ್ತದಿಂದ ನೋಡುತ್ತಿದ್ದ ಹರಿಹರನ ಮೇಲೆ ಹರಿದಿತ್ತು.


ಲಂಕೇಶನ ಮಗ ಅಕ್ಷಯನ ಬಣ್ಣದ ಮಾತುಗಳು ಹರಿಹರನ ಅರ್ಧ ಬುದ್ಧಿಯನ್ನು ತಿಂದಿದ್ದರಿಂದ, ಈ ದೃಶ್ಯವೈಭವವು ಹೊಸ ಭ್ರಮಾಲೋಕವನ್ನು ಸೃಷ್ಟಿಸಿತ್ತು. ಸಿಗರೇಟು ಸೇದುವುದು ಧೈರ್ಯ, ಸಾಹಸದ ಸಂಕೇತ, ವೀರಾಗ್ರಣಿಯೊಬ್ಬ ಕಲಿಯಲೇಬೇಕಾದ ವರಸೆ ಎಂಬಂತೆ ಮನೋಬಿಂಬಿತ ಮೌಢ್ಯವೊಂದು ಸಿಗರೇಟಿನ ಹವ್ಯಾಸವಿದ್ದ ಹರಿಹರನ ಮನತುಂಬಿತ್ತು.


ಮಾಯಾ ಪೆಟ್ಟಿಗೆಯಲ್ಲಿ ಈ ದೃಶ್ಯ ನಡೆಯುತ್ತಿದ್ದಾಗ ಬದಿಯಲ್ಲಿ ಹಾಕಿದ್ದ 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಾಲು ಅವನ ಗಮನಕ್ಕೆ ಬರಲೇ ಇಲ್ಲ


                                 ******


ಹರಿಹರ ತಂದೆ ತಾಯಿ ಇಲ್ಲದ ತಬ್ಬಲಿ. ಅವನನ್ನು ಸಾಕಿ ಬೆಳೆಸಿದ್ದು ಅವನ ಅಜ್ಜಿ ಜಾನಕಜ್ಜಿ. ಅವಳಿಗೆ ಈ ಹರಿಹರನೆ ಸರ್ವಸ್ವ. ಅಷ್ಟೊಂದು ಮುದ್ದು ಮಾಡುತ್ತಿದ್ದಳು ಇವನನ್ನು ಅವಳಿಗೆ ಇದ್ದದ್ದು ಒಂದು ಮನೆ,ಸ್ವಲ್ಪವೇ ಜಾಗ ಹೆಚ್ಚಿನ ದುಡಿಮೆಗಾಗಿ ಹೋಂ ಸ್ಟೇಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಸೀತಾಪುರದಲ್ಲಿ ಹೋಂಸ್ಟೇಗಳ ದುಡಿಮೆಗೆ ಕೊರತೆ ಇರಲಿಲ್ಲ.


ಸೀತಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹರಿಹರನು ಹತ್ತನೇ ತರಗತಿ ಓದುತ್ತಿದ್ದರಿಂದ ತನ್ನ ಮೊಮ್ಮಗನು ಅವನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ ಎಂಬ ಧೃಡನಂಬಿಕೆಯಲ್ಲಿದ್ದಳು ಜಾನಕಜ್ಜಿ. ಅವಳು ತನ್ನ ಗಂಡ, ಮಗ ಮತ್ತು ಸೊಸೆಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡ ಮೇಲೆ ಜೀವನದ ಮೇಲಿನ ಆಸಕ್ತಿ ಕಳೆದುಕೊಂಡರು, ಹರಿಹರನ ರೂಪದಲ್ಲಿ ಅವಳ ಉಸಿರು ಉಳಿದಿತ್ತು.


ಹರಿಹರನು ಓದಿನಲ್ಲಿ ಅಷ್ಟಕ್ಕಷ್ಟೇ ಆದರೆ ಓಟದಲ್ಲಿ ಎಲ್ಲರಿಗಿಂತ ಎರಡು ಹೆಜ್ಜೆ ಮುಂದೆ, ಅದೊಂದು ದಿನ ಅಂತರ್ಶಾಲಾ ಓಟದ ಸ್ಪರ್ಧೆಗೆ ಒಬ್ಬನ ಆಯ್ಕೆಯಾಗಿತ್ತು. ಆಯ್ಕೆಯಲ್ಲಿ ಹರಿಹರನನ್ನು ಕೈಬಿಡಲಾಗಿತ್ತು. ಹರಿಹರನು ಓದಿನಲ್ಲಿ ಮೊದಲೇ ಹಿಂದೆ ಇನ್ನು ಈ ರೀತಿ ಆಟೋಟಗಳಿಗೆ ಹೋದರೆ ಖಂಡಿತ ನಪಾಸಾಗುತ್ತಾನೆ ಎಂಬುದು ಕಾರಣವಾಗಿದ್ದರೂ, ಇವನ ಬದಲು ಇವನದೇ ತರಗತಿಯಲ್ಲಿ ಓದುತ್ತಿದ್ದ ಪ್ರಾಂಶುಪಾಲರ ಮಗ ಸ್ಪರ್ಧೆಗೆ ಆಯ್ಕೆಯಾದವನು, ಇದರ ಹಿಂದೆ  ಪ್ರಾಂಶುಪಾಲರ ಕೈವಾಡವಿತ್ತು ಎಂಬ ಗಾಳಿಸುದ್ದಿ ಶಾಲೆಗೆ ಹರಡಿತ್ತು.


ಕ್ರೀಡಾಪಟುವೊಬ್ಬನಿಗೆ ತನಗೆ ಸಾಮರ್ಥ್ಯ ಇದ್ದೂ ಕೂಡ ಈ ರೀತಿಯ ಮೋಸ, ಕುತಂತ್ರಗಳಿಗೆ ಅವನ ಶ್ರಮವೆಲ್ಲ ವ್ಯರ್ಥವಾದರೆ ಅದಕ್ಕಿಂತ ದೊಡ್ಡ ಅಘಾತ ಇನ್ನೊಂದಿಲ್ಲ. ಅಂತೆಯೇ ಹರಿಹರನಿಗೂ ಆಯಿತು. ಓಟದ ಅಂಗಣ ಇವನಿಗೆ ಭಕ್ತಿ ಭೂಮಿ, ಇವನು ತನ್ನ ಓಟಕ್ಕಾಗಿ ಪಟ್ಟಿದ್ದ ಶ್ರಮ, ಆ ಅಂಗಣದ ಕಣಗಳಲ್ಲಿ ಇವನ ಬೆವರ ರೂಪದಲ್ಲಿ ಎರಕಗೊಂಡಿತ್ತು. ಚೆನ್ನಾಗಿ ಆಡುವವರಿಗೂ ಆಡಲೆಂದೆ ಬದುಕುವವರಿಗೂ ವ್ಯತ್ಯಾಸವಿದೆ. ಇಂತಹ ಭಾವನಾಭರಿತ ವಿಷಯವನ್ನು ಯಾರೇ ಕಿತ್ತುಕೊಂಡರು ಅಥವಾ ಕಳೆದುಕೊಂಡರು ಆಗುವ ದುಃಖದ ಮುಂದೆ ಕಾಡುವ ಕಾರಣಗಳು ಕಳೆಗುಂದಿ ಬಿಡುತ್ತವೆ.


ಇದರಿಂದಾಗಿ ಮಾನಸಿಕ ಅಘಾತದಿಂದ ಹರಿಹರನು ಓಟಕ್ಕಿರಲಿ ವ್ಯಾಯಾಮ, ಅಭ್ಯಾಸಗಳಿಗೂ ಹೋಗಲಿಲ್ಲ. ಏನೂ ಬೇಡವೆಂಬ ಮನಸ್ಥಿತಿಯಲ್ಲಿ ಅವನ ಉತ್ಸಾಹ ಉಡುಗಿಹೋಗಿತ್ತು. ಈ ಬೇಸರದಿಂದ ಹೊರಬರಲು ಅವನು ತನ್ನ ಗೆಳೆಯನಾದ ಅಕ್ಷಯನಲ್ಲಿ ತನ್ನ ಗೆಳೆಯನಾದ ಅಕ್ಷಯನಲ್ಲಿ ತನ್ನ ನೋವನ್ನು ತೋಡಿಕೊಂಡಾಗ

"ಓಟದ ಸ್ಪರ್ಧೆಗೆ ನನ್ನ ಆಯ್ಕೆಯಾಗಿಲ್ಲ ಕಣೋ, ತುಂಬಾ ಬೇಜಾರಾಗ್ತಿದೆ. ನನಗೆ ಆ ದುಃಖವನ್ನು ತಡ್ಕೊಳ್ಳೋಕ್ಕೆ ಆಗ್ತಾ ಇಲ್ಲ " ಎಂದ ಹರಿಹರ.

"ನೀನೇನು ಟೆನ್ಷನ್ ತಗೋಬೇಡ, ನಾನು ಹೊಡಿಯೋ ಸಿಗರೇಟ್ನ ಒಂದು ಧಮ್ ಬಿಡು, ನಿನ್ನ ಚಿಂತೆನೂ ಆ ಹೊಗೆಯ ಜೊತೆ ಹೊರಟು ಹೋಗುತ್ತೆ " ಎಂದಿದ್ದ ಅಕ್ಷಯ.

ತನಗೆ ಚಿಟ್ಟು ಹಿಡಿಸುತ್ತಿದ್ದ ಯೋಚನೆಯನ್ನು ಕಳೆದುಕೊಳ್ಳಲು ಆ ಪ್ರಯತ್ನಕ್ಕೂ ಸಿದ್ಧನಿದ್ದ ಹರಿಹರ. ವಿಷ ಕುಡಿದ ಕಷ್ಟಕಾಲದಲ್ಲಿ ಶಿವನು ದೇವರಾಗಿಯೂ ಕೂಡ ಏನೆಲ್ಲವನ್ನು ಮಾಡಿದ್ದ. ಸಾಮಾನ್ಯ ಹುಡುಗನಾದ  ಇವನು ಮಾಡಬಾರದೇ?!..

ಅಕ್ಷಯನ ತಂದೆ ಗ್ರಾಮ ಪಂಚಾಯತಿ ಸದಸ್ಯ, ಸ್ವಂತ ಅಂಗಡಿಯ ಮಾಲೀಕ. ಅಕ್ಷಯನಿಗೆ ಹಣದ ಜೊತೆಯೇ ಹಾವ್ಯಾಸಗಳು ಅಂಟಿದ್ದವು. ಸಂಸ್ಕಾರದ ಜೊತೆಗೆ ಸದ್ಗುಣಗಳು ಬಿಟ್ಟು ಹೋಗಿದ್ದವು. ತಾನು ಬಿದ್ದಿದ್ದ ಮೃತ್ಯುಕೂಪದಲ್ಲಿ ತಿಳಿದೋ ತಿಳಿಯದೆಯೋ ಹರಿಹರನನ್ನೂ ಎಳೆದು ಬಿಟ್ಟಿದ್ದ ಅಕ್ಷಯ!.

ಮೊದಲಿಗೆ ಸಿಗರೇಟುಗಳನ್ನು ಹಂಚಿಕೊಂಡು ಪುಡಿ ಮಾಡುತ್ತಿದ್ದರು. ಹರಿಹರನ ಅರಿವನ್ನು ಮೀರಿ ಧೂಮಪಾನ ಚಟವಾಗಿಹೋಗಿತ್ತು. ಕ್ರಮೇಣ ಅಜ್ಜಿಯ ಬಳಿ ಹಣ ಕೇಳಿ ತಂದೋ, ಕದ್ದು ತಂದೋ ಸಿಗರೇಟನ್ನು ಕೊಂಡು ಯಾರಿಗೂ ತಿಳಿಯದಂತೆ ಅಡಗಿ ಸೇದತೊಡಗಿದ್ದ.

                           ******


ಮಾ ಯಾ ಪೆಟ್ಟಿಗೆಯಲ್ಲಿ ಕಾಣುತ್ತಿದ್ದ ದ್ರಶ್ಯ. ಆ ನಾಯಕನು ತನ್ನ  ಖದರನ್ನು ಸಿಗರೇಟಿನ ಮೂಲಕ ತೋರಿದ ರೀತಿ,ಅಂಗಡಿಯಲ್ಲಿದ್ದ ಹರಿಹರ ಹಾಗೂ ಅಕ್ಷಯನ ಗಮನ ಸೆಳೆದದ್ದರಿಂದ ಅವರ ಪ್ರತ್ಯುತ್ಪನ್ನ ಮತಿ ಚುರುಕುಗೊಂಡು ಸಿಗರೇಟನ್ನು ತೆಗೆದುಕೊಂಡು ಅದೇ ಅಂಗಡಿಯ ಹಿಂದಿನ ಕುರುಚಲು ಕಾಡಿಗೆ ಹೋದರು.ಅಲ್ಲಿ ತಮ್ಮ ಧೂಪಸೇವೆಯನ್ನು ಪೂರೈಸುತ್ತಿರಬೇಕಾದ

ರೆ

"ಸೀತೆ ಜೋಪಡಿ ಮುಳುಗೋವಷ್ಟು ನೀರು ಬಂದಿದೆ, ಇನ್ನೇನು ದೇವಸ್ಥಾನವೂ ಮುಳುಗುತ್ತಂತೆ " ಎಂದು ಅಂಗಡಿಯಲ್ಲಿ ಕೂಗಿಕೊಂಡ.

ಇದನ್ನು ಕೇಳಿಸಿಕೊಂಡ ಹರಿಹರನು ತಾನು ಚಿಕ್ಕದಿನಿಂದ ನೋಡಿದ ತನ್ನ ಊರಿನ ಹೆಮ್ಮೆಯಾದ ಸೀತೆಯ ಜೋಪಡಿಯ ಪರಿಸ್ಥಿತಿ ಏನಾಗಬಹುದೆಂಬ ಕುತೂಹಲ ದಿಂದ ಅರ್ಧ ಸುಟ್ಟ ಸಿಗರೇಟನ್ನು ಅಲ್ಲೇ ಬಿಸುಟು, ಸೀತಾಪುರದ ಕಲ್ಲಿನ ಜೋಪಡಿಯೆಡೆಗೆ ಓಡ ತೊಡಗಿದರು. ಆದರೆ ಇಬ್ಬರಿಗೂ ಓಡಲು ಉಸಿರೇ ಸಾಲಲಿಲ್ಲ. ಸಿಗರೇಟಿನ ಹೊಗೆಯ ಕರಿ ಅವರ ಶ್ವಾಸಕೋಶದ ನಾಳಗಳಲ್ಲಿ ತುಂಬಿದ್ದರೆ ಓಡಾಲಾದರೂ ಹೇಗೆ ಸಾಧ್ಯ?!

ಓಡಲಾಗದೆ ಗ್ರಾಮಸ್ಥನನ್ನು ವಿಚಾರಿಸಿದಾಗ, ಗ್ರಾಮಸ್ಥನು ಕಂಡ ವರದಿಯನ್ನು  ಈ ಹುಡುಗರ ವಿಚಾರಣೆಯ ಮೇರೆಗಾಗಿ ಗುಡ್ಡದ ಅತ್ತ ಕಡೆ ದೊಡ್ಡ ಮಳೆ ಸುರಿದಿದೆಯಾಗಿಯೂ, ಕೆರೆಯ ತೊರೆ ದೊಡ್ಡ ನಡಿಯಾಗುತ್ತಿದೆ ಎಂಬುದಾಗಿಯೂ ಹೇಳಿದನು.

ಅಷ್ಟರಲ್ಲೇ ಲಂಕೇಶನ ಅಂಗಡಿಗೆ ಬೆಂಕಿ ಬಿದ್ದ ಸುದ್ದಿ ತಿಳಿಯಿತು.

ಲಂಕೇಶನ ಅಂಗಡಿ ಬಿದಿರ ತಟ್ಟಿ, ತೆಂಗಿನಗರಿಗಳ ಹೆಣಿಗೆಗಳಿಂದ ಮಾಡಲ್ಪಟ್ಟಿತ್ತು, ಮಾಡಿಗೆ ಹುಲ್ಲು ಹೊದ್ದು ಒಪ್ಪ ಮಾಡಲಾಗಿತ್ತು. ಪ್ರವಾಸಿಗರನ್ನು ಈ ವಿನ್ಯಾಸ ಹೆಚ್ಚು ಆಕರ್ಷಿಸುತ್ತದೆ ಎಂಬ ಯೋಜನೆಯಲ್ಲಿ  ಲಂಕೇಶನ ಅಂಗಡಿ ಕಟ್ಟಲಾಗಿತ್ತು. ಇವರು ಓದುವ ಭರದಲ್ಲಿ ಬಿಸುಟಿದ್ದ ಸಿಗರೇಟಿನ ಕಿಡಿ ಅಂಗಡಿಗೆ ತಗುಲಿತ್ತು. ಮಹಾಮಳೆಯ ಮುಂಚಿನ ಬೀಸುಗಾಳಿಗೆ ಜ್ವಾಲೆಯಾಗಿ ರೂಪುಗೊಂಡಿತ್ತು. ಅಂಗಡಿಯಲ್ಲಿದ್ದ ಅಕ್ರಮ ಮದ್ಯದ ಸರಂಜಾಮು ಬೆಂಕಿಯ ಕೆನ್ನಾಲಿಗೆಗೆ ರುಚಿಕರವೆನಿಸಿತ್ತೋ ಏನೋ ನೆರೆ ನೋಡಲು ಹೋದ ಜನರು ತಿರುಗಿ ಬರುವುದರೊಳಗೆ ಅಂಗಡಿಗೆ ಅಂಗಡಿಯೇ ಸುಟ್ಟುಬೂದಿಯಾಗಿತ್ತು.

'ಕರ್ಮ' ಎಂಬುದು ಅವರೆದುರು ಸಿಗರೇಟು ಸೇದಿತ್ತು, ಬಾನು ಹೊಗೆಯಾಗಿ, ಭುವಿ ಬೂದಿಭರಿತವಾಗಿತ್ತು. ತತ್ ಕ್ಷಣದಲ್ಲೇ ಮುಸಲರೂಪದ ಹನಿಗಳನ್ನೊಳಗೊಂಡ ಮಳೆ ಶುರುವಾಗಿತ್ತು. ಪ್ರಯೋಜನವೇನು? ಅಲ್ಲಿ ಎಲ್ಲವೂ ಕರಕಲಾಗಿತ್ತು.

ಹರಿಹರನಿಗೆ ಅಂಗಡಿಗೆ ಬೆಂಕಿ ತಗುಲಿದ್ದು ಬಿಸುಟಿದ್ದ ಸಿಗರೇಟಿನಿಂದಲೇ ಎಂಬ ಸಂಶಯ ಬಲವಾಗಿತ್ತು, ತಾನು ಓಟದಲ್ಲಿ ಓಡುವಾಗ ಸುಡುಬಿಸಿಲಲ್ಲೂ ಸುಸ್ತಾಗದಿರುವಾಗ ಈಗ ಎರಡು ಹೆಜ್ಜೆ ಓಡಿದರೂ ಸಾಕೆನಿಸುವುದು ಸಿಗರೇಟು ಎಂಬ ರಾಕ್ಷಸನ ಮಾಯೆಯಿಂದಲೇ ಎಂಬುದು ತಿಳಿಯುತ್ತಿದ್ದಂತೆ, ತಾನು  ಹಿಡಿದ ತಪ್ಪು ದಾರಿಯ ಹೆಜ್ಜೆಗುರುತುಗಳು ಕಾಣತೊಡಗಿದವು.

ಅಷ್ಟರಲ್ಲೇ ತನ್ನ ಮನೆಯ ಗೋಡೆಯೊಂದು ಕುಸಿದಿದೆ ಎಂಬುದು ನೆರೆಮನೆಯ ಶಂಕ್ರಣ್ಣನಿಂದ ತಿಳಿದ ಹರಿಹರನು, ಮನೆಯಲ್ಲಿ ಒಂಟಿಯಾಗಿದ್ದ ತನ್ನ ಅಜ್ಜಿಯನ್ನು ಉಳಿಸಿಕೊಳ್ಳಲಾಗಿ ಜೀವ ಬಿಟ್ಟು ಓಡಿದ. ಈಗಲೂ ಅವನ ಉಸಿರು ಹಿಡಿಯುತ್ತಿತ್ತು ಆದರೆ ತಾನು ತನಗೆ ಹಾಗೂ ತನ್ನ ಪ್ರೀತಿಯ ಅಜ್ಜಿಗೆ ಇಂತಹ ಕೆಟ್ಟ ಚಟದಿಂದ ಮಹಾಮೋಸವನ್ನೇ ಮಾಡಿದ್ದೇನೆ ಎಂಬ ಪಶ್ಚಾತ್ತಾಪದ ಜ್ವಾಲೆ ಅಂತಹ ಅಬ್ಬರದ ಮಳೆಯಲ್ಲೂ ಜ್ವಲಿಸುತ್ತಿದ್ದರಿಂದ ಮನೆ ಮುಟ್ಟಿಯೇ ನಿಂತ.

ಮನೆಯ ಉತ್ತರದ ಗೋಡೆಯ ಕೆಲ ಭಾಗ ಬಿದ್ದಿತ್ತು. ಜಾನಕಜ್ಜಿ ಹಿಂದಿನ ಕೊಟ್ಟಿಗೆಯೊಂದರಲ್ಲಿ ರಕ್ಷಣೆ ಪಡೆದಿದ್ದಳು. ತನ್ನ ಅಜ್ಜಿ ಕ್ಷೇಮವಾಗಿರುವುದನ್ನು ನೋಡಿದ ಹರಿಹರ ಹೊರಗಿನ ಮಳೆಯನ್ನು ಮೀರಿಸುವಂತೆ ತನ್ನ ಅಜ್ಜಿಯನ್ನು ತಬ್ಬಿ ಜೋರಾಗಿ ಅತ್ತ.

ಕೆಟ್ಟ ಘಳಿಗೆಯಲ್ಲಿ ಮಾಡಿದ ಚಿಕ್ಕ ತಪ್ಪು ಹೇಗೆ ಕಪ್ಪುಕುಳಿಯಂತೆ ವ್ಯಕ್ತಿಯನ್ನೂ, ವ್ಯಕ್ತಿತ್ವವನ್ನೂ ತನ್ನೊಳಗೆ ಸೆಳೆದುಕೊಂಡು ನಿರ್ನಾಮಗೊಳಿಸುತ್ತದೆ ಎಂಬ ಅನುಭವ ಹರಿಹರನಿಗಾಗಿತ್ತು.

ತಪ್ಪು ಹಾದಿಯನ್ನು ತುಳಿದಿದ್ದ ಹೆಜ್ಜೆಗಳು ಮತ್ತೊಮ್ಮೆ ಓಟದ ಅಂಗಳದಲ್ಲಿ ಅದ್ಭುತವನ್ನು ಸೃಷ್ಟಿಸಲು ಹೊರಟಿದ್ದವು.

ಸುಟ್ಟ ಅಂಗಡಿಯ ಜೊತೆಗೆ ಇವನ ದುಶ್ಚಟ ಸುಟ್ಟುಹೋಗಿತ್ತು. ಅಂಗಡಿಯ ಸುಟ್ಟ ಅವಶೇಷಗಳನ್ನು ಮಳೆ ತೊಳೆದರೆ, ಇವನ ಕಣ್ಣೀರು ಇವನ ವ್ಯಸನವನ್ನು ತೊಳೆದುಹಾಕಿತ್ತು.

ಕಥೆಯಲ್ಲಿ ಬರುವ ಸ್ಥಳ, ಘಟನೆಗಳು ಕಾಲ್ಪನಿಕ. ಸತ್ಯ ವಿಷಯಗಳು ಕಥೆಗೆ ಪ್ರೇರಕವಾಗಿವೆಯಷ್ಟೇ. ಇದು ನಡೆದ ನೈಜ ಘಟನೆಯಲ್ಲ )

ಕಥೆ ಇಷ್ಟವಾದಲ್ಲಿ ಇತರರಿಗೂ ಈ Pdf ಹಂಚಬಹುದು. ದಯವಿಟ್ಟು ಕೆಳಗಿನ email ಗೆ ನಿಮ್ಮ ಅನಿಸಿಕೆ ತಿಳಿಸಿ

ಲೇಖಕರ ಸಂಪರ್ಕ : hemanthhbhat588@gmail.com

Write a comment ...

Hemanth Londhe

Show your support

ಬರಹಗಳನ್ನು ಬೆಂಬಲಿಸಲು

Write a comment ...